1929-. ಭಾರತದ ಪ್ರಸಿದ್ಧ ಚಲನಚಿತ್ರ ಹಿನ್ನೆಲೆಗಾಯಕಿ. 1929 ಸೆಪ್ಟೆಂಬರ್ 28ರಂದು ಜನಿಸಿದರು. ಇಂದೂರಿನಲ್ಲಿ 30ಕ್ಕೂ ಹೆಚ್ಚುವರ್ಷ ಗಾಯಕ ವೃತ್ತಿ; ಭಾರತೀಯ ಚಿತ್ರರಂಗದ ಪ್ರಶ್ನಾತೀತ ಮಾಧುರ್ಯರಾಣಿ. ‘ಭಾರತದ ಗಾನಕೋಗಿಲೆ’ ಎಂದೇ ಖ್ಯಾತಿ ಪಡೆದ ಪ್ರಪಂಚಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನುಳ್ಳ ಗಾಯಕಿ.
ತಂದೆ, ಸಂಗೀತರತ್ನ ಮಾಸ್ಟರ್ ದೀನಾನಾಥ ಮಂಗೇಶಕರ್, ತಾಯಿ ಶುದ್ಧಮತಿ ಮಂಗೇಶಕರ್ (ಮಾಯಿ). ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಹೃದಯನಾಥ ಮಂಗೇಶಕರ್ ಸೋದರ, ಸೋದರಿಯರಾದ ಉಷಾ, ಮೀನಾ, ಆಶಾ ಮೂವರು ಕಲಾಪ್ರಿಯರು ಹಾಗೂ ಚಿತ್ರಗಳಿಗೆ ಹಿನ್ನೆಲೆಗಾಯನ ನೀಡಿರುವವರು.

ಲತಾ ಏಳುವರ್ಷದವಳಿದ್ದಾಗಲೇ ತಂದೆಯ ನಾಟಕ ಕಂಪನಿಯಲ್ಲಿ ನಾರದ ಪಾತ್ರವಹಿಸಿ ಗಾಯನದಲ್ಲಿ ಶಹಭಾಸಗಿರಿ ಪಡೆದರು. 9 ವರ್ಷದ ಬಾಲಕಿಯಾಗಿದ್ದಾಗ (1938) ತಂದೆಯ ಜೊತೆಗೂಡಿ ಪುಣೆಯ ಗಣೇಶೋತ್ಸವಗಳಲ್ಲಿ ಹಾಡಿ ಕೀರ್ತಿ ಸಂಪಾದಿಸಿದ್ದರು. ಇವರಿಗೆ 13ನೆಯ ವಯಸ್ಸಿನಲ್ಲೇ 1942 ಏಪ್ರಿಲ್ 24 ತಂದೆಯ ವಿಯೋಗವಾಯಿತು. ಅನಂತರ ಕೊಲ್ಲಾಪುರ, ಮುಂಬಯಿಗೆ ಸ್ಥಳಾಂತರ, ಮುಂಬಯಿಯಲ್ಲಿ ಪಹಲೀ ಮಂಗಳ ಗೌರ್ ಚಿತ್ರದಲ್ಲಿ ನಟಿಯಾಗಿ ಪ್ರವೇಶ ಪಡೆದರು. ಮೊದಲಿಗೆ ಚಿತ್ರಕ್ಕಾಗಿ ಹಾಡಿದ ಗೀತೆ ನಟಲೀ ಚೈತ್ರಾಚೀ ನವಲಾಈ 1946ರಲ್ಲಿ ವಿನಾಯಕರಾವ್ ಕಂಪನಿಯ ಪ್ರಪ್ರಥಮ ಹಿನ್ನೆಲೆಗಾಯಕಿಯಾದರು. ಆಗ ಬಂದ ಅಪ್‍ಕೀ ಸೇವಾ ಮೇ ಚಿತ್ರದ ಪಾಲಾಗುಕರ ಚೋರಿ ಹಾಡು ಅತ್ಯಂತ ಪ್ರಸಿದ್ಧವಾಯಿತು. 1947ರಲ್ಲಿ ಮಜಬೂರ್ ಚಿತ್ರದಲ್ಲಿ ಮುಖೇಶ್ ಚೊತೆ ಹಾಡಿದ ಓ ಗೋರಾ ಗೋರಾ ಅಂಗ್ರೇಜಿ ಛೋರಾ ಹಾಡಿನಿಂದ ಅಪಾರ ಕೀರ್ತಿ ಲಭ್ಯವಾಗಿ ಅಲ್ಲಿಂದ ಮುಂದೆ ಹಿನ್ನೆಲೆ ಗಾಯಕಿಯಾಗಿ ಮುಂದುವರಿದು ಖೇಮಚಂದ ಪ್ರಕಾಶ, ಅನಿಲಬಿಶ್ವಾಸ, ಸಿ ರಾಮಚಂದ್ರ ಹುಸ್ನಲಾಲ್-ಭಗತ್‍ರಾಮ್ ಪಂಡಿತ್ ಅಮರನಾಥ್ ಶಂಕರ್-ಜೈಕಿಶನ್, ಸಚಿನ್‍ದೇವ್ ಬರ್ಮನ್, ವಸಂತ ದೇಸಾಯಿ ಮುಂತಾದ ಸಂಗೀತ ನಿರ್ದೇಶಕರು ಇವರಿಂದ ಯಥೇಚ್ಛವಾಗಿ ಹಾಡುಗಳನ್ನು ಮುದ್ರಿಸಿ ಕೊಂಡರು. ಖೇಮಚಂದರ ಮಹಲ್ ಚಿತ್ರದ ಆಯೇಗಾ-ಆಯೇಗಾ ಆನೇವಾಲಾ ಎಂಬ ಹಾಡು ಚಿತ್ರಜಗತ್ತಿನ ಜನರನ್ನು ಮೋಡಿಮಾಡಿತು.

ಇವರು ಗಾಯನ ಪ್ರಪಂಚಕ್ಕೆ ಕಾಲಿಟ್ಟಾಗ ನೂರ್‍ಜಹಾನ್‍ಳಿಂದ ಅತ್ಯಂತ ಪ್ರಭಾವಿತೆಯಾಗಿದ್ದರು. ಪ್ರಾರಂಭದ ಹತ್ತು ವರ್ಷ ಅವರ ಧ್ವನಿಯ ಪ್ರತಿಧ್ವನಿಯಂತಿದ್ದರು. ಆಗ ಗೀತಾರಾಯ್ ಶಂಶಾದ್‍ಬೇಗಂ ಮುಂತಾದವರು ಅತ್ಯುನ್ನತ ಸ್ಥಾನದಲ್ಲಿದ್ದರು. ಹೀಗಾಗಿ ಇವರು ಒಂದು ಕಡೆ ಶಂಶಾದ್ ಬೇಗಂ ಅಮೀಬಾಯಿ ಕರ್ನಾಟಕಿ, ಜೋಹರ್‍ಬಾಯಿ ಪರುಲ್‍ಫೋಷ್ ರಾಜಕುಮಾರಿ ಗೀತಾರಾಯ್ ಮುಂತಾದವರೊಡನೆ ಸ್ಪರ್ಧಿಸಬೇಕಾಗಿತ್ತು. ತಂದೆಯ ಬಳಿ ಅಲ್ಪಸ್ವಲ್ಪ ಸಂಗಿತಾಭ್ಯಾಸ ಆಗಿತ್ತು. ಅದು ಏನೇನೂ ಸಾಲದಾಗಿತ್ತು. ಮುಂದೆ ಅಮಾನ್ ಅಲೀಖಾನ್ ಅಮಾನತ್ ಆಲೀಖಾನ್, ಇವರ ಬಳಿ ಶಾಸ್ತ್ರೀಯ ಸಂಗೀತಾಭ್ಯಾಸವಾಯಿತು. ಗುಲಾಮ್ ಹೈದರ್, ಖೇಮಚಂದ್ರಪ್ರಕಾಶ್, ಅನಿಲಬಿಶ್ವಾಸ್ ಮತ್ತು ನೌಷದ್ ಬಳಿ ಹಿಂದಿ, ಉರ್ದು ಸಾಹಿತ್ಯಾಭ್ಯಾಸವೂ ಆಯಿತು. ಹೀಗೆ ಸತತ ಸಾಧನೆ ಪ್ರಯತ್ನಗಳಿಂದಾಗಿ ಸಿದ್ಧಿಪಡೆದ ಇವರು ಮುಂದೆ ಅಪಾರ ಯಶಸ್ಸುಗಳಿಸಿದರು.

ಗೀತೆಯ ಭಾವಾರ್ಥಕ್ಕೆ ತಕ್ಕಂತೆ ಹಾಡುವ ಸಾಮಥ್ರ್ಯದಿಂದಾಗಿ ಇವರು ಹಿಂದೀ ಚಿತ್ರರಂಗದ ಅನುಪಮ ಗಾಯಕಿಯಾಗಿದ್ದಾರೆ. ಪ್ರಣಯ, ದೇಶಭಕ್ತಿ, ಕರುಣೆÂ ಮಾತೃವಾತ್ಸಲ್ಯ ಹೀಗೆ ಯಾವ ಭಾವಾಭಿವ್ಯಕ್ತಿಯಾದರೂ ಅದಕ್ಕೆ ತನ್ನತನದ ಮುದ್ರೆನೀಡಿ ಅದರ ರಾಗಧಾಟಿಯನ್ನು ಒಮ್ಮೆಗೆ ಗ್ರಹಿಸಿ ಸಮರ್ಥವಾಗಿ ಹಾಡಬಲ್ಲ ನೈಪುಣ್ಯ ಇವರದು. ಇವರ ಧ್ವನಿಯನ್ನು ಯಾವ ನಟಿಗಾದರು ಹೊಂದಿಸಬಹುದು. ಸಂಯೋಜಕರು ರಾಗ ಸಂಯೋಜಿಸಿದ ಯಾವುದನ್ನಾದರೂ ಹಾಡಬಲ್ಲ ಕಂಠ ಇವರದು. ಜೊತೆಗೆ ತನ್ನ ಕಂಠದಲ್ಲಿ ವಿಶಿಷ್ಟವೆಂಬಂತೆ ಅಡಗಿರುವ ನಾದ ಮಾಧುರ್ಯವನ್ನು ಬೆರೆಸಿ ಸಂಯೋಜನೆಯನ್ನು ಮತ್ತಷ್ಟು ಸುಂದರಗೊಳಿಸುವ ಸಾಮಥ್ರ್ಯ ಇವರದು.

ಪರಾಬ್ ಚಿತ್ರದ ಓ ಸಜನಾ ಬರಖಾ ಬಹಾರ್ ಆಯೀ; ಬೀಸ್‍ಸಾಲ್ ಬಾದ್‍ನ ಕಹೀಂ ದೀಪ್ ಜಲೇ ಕಹೀಂ ದಿಲ್; ಮಧುಮತಿಯ ಆಜಾರೇ ಪರದೇಶೀ; ಅಂದಾಜ್ ಚಿತ್ರದ ತೋಡ ದಿಯಾ ದಿಲ್ ಮೇರಾ, ‘ಸತ್ಯಂಶಿವಂಸುಂದರ’(ಸತ್ಯಂಶಿವಂಸುಂದರಮ್) ಕಹೀಂದೀಪಜಲೆ (ಬೀಸ್‍ಸಾಲ್‍ಬಾದ್) ಬೈರನ ನೀಂದ್‍ನ ಆಯಿ (ಚಾಚಾ ಜಿಂದಾಬಾದ್) ಹೀಗೆ ಸಾವಿರಾರು ಉಲ್ಲೇಖನೀಯ ಚಿತ್ರಗೀತೆಗಳನ್ನು ಇವರು ಹಾಡಿದ್ದಾರೆ. ಚಿತ್ರಸಂಗೀತಕ್ಕೂ ಶಾಸ್ತ್ರೀಯ ಸಂಗೀತದ ಜ್ಞಾನ ಇರಬೇಕು ಎನ್ನುವ ಇವರಿಗೆ ಕರುಣಾರಸಭರಿತ ಶಾಸ್ತ್ರೀಯ ಹಾಡುಗಳನ್ನು ಹಾಡುವುದು ಹೆಚ್ಚು ಪ್ರಿಯ. ಭಾರತ ಚೀನಾ ಯುದ್ಧದ ಸಂದರ್ಭದಲ್ಲಿ ಜನವರಿ 27, 1963ರಲ್ಲಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲತಾ ಅವರು ಹಾಡಿದ ‘ಎ ಮೇರೆ ವತನ್ ಕೆ ಲೊಗೊ’ ಹಾಡನ್ನು ಕೇಳುತ್ತಿದ್ದ ನೆಹರೂ ಪ್ರಭಾವಿತರಾಗಿ ಕಂಬನಿ ಮಿಡಿದರು. ಇವರು ಹಾಡಿರುವ ಮೀರಾ ಗೀತೆಗಳು ಉಲ್ಲೇಖನೀಯ. ಬಾದಲ್ ಮತ್ತು ಕಾಂಚನ್ ಗಂಗಾ ಎಂಬ ಎರಡು ಚಿತ್ರಗಳ ನಿರ್ಮಾಪಕಿ ಕೂಡ. ಇವರು ಸಂಗೀತ ನಿರ್ದೇಶಿಸಿದ ರಾಮ್ ರಾಮ್ ಪಹುನ್ ಮತ್ತು ಸಾಧಿ ಮನ್ ಸೆ ಚಿತ್ರಗಳಲ್ಲಿ ಎರಡನೆಯದಕ್ಕೆ ರಾಷ್ಟ್ರಪತಿಗಳ ಪದಕವೂ ಲಭ್ಯವಾಗಿದೆ.

ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ಇವರ ಉಲ್ಲೇಖವಿದೆ. ಗಿನ್ನೆಸ್ ವಿಶೇಷ ಸಮಾರಂಭದಲ್ಲಿ ಗೌರವಿಸಲ್ಪಟ್ಟ ಮೊದಲ ಭಾರತೀಯರು (1974). ಭಾರತೀಯ ಹಲವು ಭಾಷೆಗಳಲ್ಲಿ 1948-74ರವರೆಗೆ ಯುಗಳಗಾಯನ, ಸಾಮೂಹಿಕ ಗಾಯನ ಸೇರಿದಂತೆ ಸುಮಾರು 30,000 ಹಾಡುಗಳನ್ನು ಧ್ವನಿಮುದ್ರಿಸಿದ ದಾಖಲೆಯಿದೆ. ಇದು 40,000 ಸಂಖ್ಯೆ ಸಮವಿದೆಯೆಂದೂ ಒಂದು ಅಂದಾಜು. ಮುಂದೆ, ದಿನಕ್ಕೆ ಸರಾಸರಿ ಒಂದು ಹಾಡಿನಂತೆ ಧ್ವನಿ ಮುದ್ರಣಗೊಂಡಿದೆ.

ಇವರಿಗೆ ಸಂದ ಗೌರವಗಳು, ದೊರಕಿದ ಮನ್ನಣೆ ಪ್ರಶಸ್ತಿಗಳು ಅಪಾರ. ಪದ್ಮಭೂಷಣ (1969),  ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (1989), ರಾಜೀವಗಾಂಧಿ ಪ್ರಶಸ್ತಿ (1997), ಪದ್ಮವಿಭೂಷಣ (1999), ಭಾರತರತ್ನ (2001) ಮುಂತಾದುವು. ಕೆಲವು ಪ್ರಮುಖವಾದುವುಗಳು ದಕ್ಷಿಣ ಅಮೆರಿಕದ ಸುರಿನಾಮ್ (1980), ಅಮೆರಿಕದ ಹೋಸ್ಟನ್ (1987), ಇವರನ್ನು ಗೌರವ ನಾಗರಿಕ ಎಂದು ಪರಿಗಣಿಸಿವೆ. ಶಿವಾಜಿ, ಕೊಲ್ಲಾಪುರ, ಪುಣೆ, ಖೈರಾಗಡ್ ಸಂಗೀತ ವಿಶ್ವವಿದ್ಯಾಲಯ, ಹೈದ್ರಾಬಾದ್ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟೊರೇಟ್ ಪದವಿ ನೀಡಿವೆ. ಇವರು 250ಕ್ಕೂ ಹೆಚ್ಚು ಟ್ರೋಫಿಗಳನ್ನೂ 150ಕ್ಕೂ ಹೆಚ್ಚು ಬಂಗಾರ ಪದಕಗಳನ್ನೂ 50ಕ್ಕೂ ಹೆಚ್ಚು ಪ್ರತಿಷ್ಠಿತ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಮಧ್ಯಪ್ರದೇಶ ಸರ್ಕಾರ ಇವರ ಹೆಸರಿನಲ್ಲಿ ಲತಾ ಮಂಗೇಶಕರ್ ಅವಾರ್ಡ್ ಸ್ಥಾಪಿಸಿದೆ (1984). ಇವರು ರಾಜ್ಯಸಭಾ ಸದಸ್ಯರೂ ಆಗಿದ್ದಾರೆ.	

(ವಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ